Monday, October 6, 2008

ಬೈಂದೂರಿನ ಹೆಸರಾಂತ ಕಲಾ ಸಂಸ್ಥೆ "ಲಾವಣ್ಯ(ರಿ) ಬೈಂದೂರು"

ಬೈಂದೂರಿನ ಸಾಂಸ್ಕೃತಿಕ ಇತಿಹಾಸದಲ್ಲಿ "ಲಾವಣ್ಯ" ೧೯೭೭ರಲ್ಲಿ ಹುಟ್ಟಿದ್ದು ಒಂದು ಆಕಸ್ಮಿಕ ಘಟನೆ. ಈ ಪರಿಸರದ ಹವ್ಯಾಸಿ ಕಲಾವಿದರಾದ ಯು. ಶ್ರೀನಿವಾಸ ಪ್ರಭು, ಬಿ. ಗಣೇಶ್ ಕಾರಂತ್, ಬಿ. ಕೃಷ್ಣ ಅಡಿಗ, ರಾಮ ಟೈಲರ್, ಅನಿಲ್ ಕುಮಾರ್, ಆರ್.ಡಿ. ಟೈಲರ್, ವಿ. ಆರ್ ಬಾಲಚಂದ್ರ, ಉಮೇಶ್ ಕುಮಾರ್, ದಿ ಮೋಹನ್ ನಾಯಕ್, ದಿ ರತ್ನಾಕರ ಆಚಾರ್ ಇವರೆಲ್ಲಾರ ಆಶಾ ಕೇಂದ್ರವಾಗಿ ಕುಡಿಯೊಡೆದ ಬೈಂದೂರು ತರುಣ ಕಲಾವೃಂದ, ಲಾವಣ್ಯ ಕಲಾವೃಂದವಾಗಿ, ಲಾವಣ್ಯ-ಬೈಂದೂರು, ಹವ್ಯಾಸಿ ಕಲಾ ಸಂಸ್ಥೆಯಾಗಿ ಬೆಳೆದು ಬಂದ ದಿನಗಳ ನೆನಪು ರೋಮಾಂಚಕ.

ಲಾವಣ್ಯ(ರಿ) ಲಾಂಛನ
೧೯೮೦ರಲ್ಲಿ ’ರೊಟ್ಟಿ ಖುಣ’ ನಾಟಕವನ್ನು ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರದರ್ಶಿಸಿ ಪ್ರಥಮ ಪಾರಿತೋಷಕ ಹಾಗೂ ಇತರ ಮೊರು ಪಾರೀತೋಷಕ ಪಡೆಯಿತು. ಬೈಂದೂರಿನ ಇತಿಹಾಸದಲ್ಲೆ ಪ್ರಥಮ ಬಾರಿಗೆ ಪ್ರಥಮ ಹಾಗೂ ಇತರ ಮೊರು ಪಾರಿತೋಷಕಗಳನ್ನು ಪಡೆದು ಬೈಂದೂರಿನ ಜನತೆ ಭೇಷ್ ಎನ್ನುವಂತಾಯಿತು. ಅಂದಿನಿಂದ ಹೊಸ ಹೊಸ ಸದಸ್ಯರು ಸೇರುತ್ತಾ ಬಂದರು. ಅಂತು ೧೯೭೭ ರಿಂದ ’ತರುಣ ಕಲಾವಿದರು’, ’ತರುಣ ಕಲಾವೃಂದ’, ’ಲಾವಣ್ಯ ಕಲಾವೃಂದ ಎಂಬ ಹೆಸರಿನಿಂದ ಕರೆಯಿಸಿಕೊಂಡು ಕರ್ನಾಟಕ ನಾಟಕ ಅಕಾಡೆಮಿಯಲ್ಲಿ ನೋಂದಾಯಿಸಲ್ಪಟ್ಟ ಈ ಸಂಸ್ಥೆ "ಲಾವಣ್ಯ(ರಿ) ಬೈಂದೂರು" ಎಂಬ ನೂತನ ನಾಮಕರಣದೊಂದಿಗೆ ಯಶಸ್ವಿ ೩೦ವರ್ಷಗಳನ್ನು ಪೂರೈಸುತ್ತಾ ಬಂದಿದೆ.

ನಾಟಕ, ಯಕ್ಷಗಾನ, ಸಂಗೀತ, ಭರತನಾಟ್ಯ ತರಬೇತಿ ಶಿಬಿರಗಳನ್ನು ಏರ್ಪಡಿಸುವುದು, ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸುವುದು, ನಾಟಕ ಸ್ಪರ್ಧೆ ಹಾಗೂ ಕಲಾ ಉತ್ಸವಗಳನ್ನು ಆಚರಿಸುವುದು, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದು, ಪ್ರತಿ ವರ್ಷ ವಾರ್ಷಿಕೋತ್ಸವದ ಸಮಯದಲ್ಲಿ ಕಲಾರಂಗದಲ್ಲಿ ಹೆಚ್ಚಿನ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸುವುದು ಇವೇ ಮುಖ್ಯವಾದ ಉದ್ದೇಶಗಳನ್ನು ಸಂಸ್ಥೆಯು ಹೊಂದಿರುತ್ತದೆ.
ನಾಟಕ ವಿಭಾಗದ ಜೊತೆಗೆ ಮಕ್ಕಳ ನಾಟಕ ವಿಭಾಗ, ಭರತ ನಾಟ್ಯ ವಿಭಾಗ, ಸಂಗೀತ ವಿಭಾಗಗಳ ರಚನೆ, ಈ ವರೆಗೆ ಸುಮಾರು ೬೦ ನಾಟಕಗಳ ೩೦೦ ಪ್ರದರ್ಶನಗಳ ನೀಡಿಕೆ, ಶ್ರೀ ಜಿ. ಸೀತಾರಾಮ ಶೆಟ್ಟಿ ಕೂರಾಡಿ ಇವರ ನಿರ್ದೇಶನದಲ್ಲಿ ಮಕ್ಕಳ ರಂಗ ತರಬೇತಿ ಶಿಬಿರ, ದಶಮಾನೋತ್ಸವ ಸಂದರ್ಭದಲ್ಲಿ ಬೈಂದೂರಿನಲ್ಲೇ ಪ್ರಪ್ರಥಮ ಬಾರಿಗೆ ರಾಜ್ಯ ಮಟ್ಟದ ನಾಟಕ ಸ್ಪರ್ಧೆ, ವಿಂಶತಿ ಉತ್ಸವ ಸಂದರ್ಭದಲ್ಲಿ ದ್ವಿತೀಯ ಬಾರಿಗೆ ರಾಜ್ಯ ಮಟ್ಟದ ನಾಟಕ ಸ್ಪರ್ಧೆ, ೩೦ನೇ ವರ್ಷದ "ರಂಗ ಲಾವಣ್ಯ-೩೦" ಸಂಭ್ರಮದ ಸಂದರ್ಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದೊಂದಿಗೆ ರಾಜ್ಯ ಮಟ್ಟದ ನಾಟಕೋತ್ಸವ, ರಾಜ್ಯ ಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಇದುವರೆಗೂ ಭಾಗವಹಿಸಿದ ಎಲ್ಲಾ ೨೦ ನಾಟಕ ಸ್ಪರ್ಧೆಗಳಲ್ಲಿ ೯ ಬಾರಿ ಪ್ರಥಮ, ೭ ಬಾರಿ ದ್ವಿತೀಯ ಹಾಗೂ ೪ ಬಾರಿ ತೃತೀಯ ಪಾರಿತೋಷಕವನ್ನು ಅಲ್ಲದೇ ಉತ್ತಮ ನಿರ್ದೇಶನ, ಉತ್ತಮ ನಟನೆ, ಉತ್ತಮ ಸಂಗೀತ, ಉತ್ತಮ ರಂಗ ಸಜ್ಜಿಕೆ ಮತ್ತು ಬೆಳಕು ಹಾಗೂ ಇತರೇ ವಿಭಾಗಗಳಲ್ಲಿ ಒಟ್ಟು ೭೩ ಪಾರಿತೋಷಕಗಳ ಗಳಿಕೆ. ಇವೆಲ್ಲವು ಲಾವಣ್ಯ(ರಿ) ಬೈಂದೂರು ಇದರ ಸಾಧನೆಯಾಗಿದೆ.

ಲಾವಣ್ಯ(ರಿ) ಬೈಂದೂರಿನ ವಿವರವಾದ ವರದಿಗೆ ಇಲ್ಲಿ ಕ್ಲಿಕ್ ಮಾಡಿ


No comments: